
17th January 2025
ಮಕರ ಸಂಕ್ರಾಂತಿ ಎಂಬ ಈ ಹಬ್ಬವು ಉಳಿದೆಲ್ಲ ಹಬ್ಬಗಳಿಗಿಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸುವ ಶ್ರೇಷ್ಠ ಹಬ್ಬವಾಗಿದೆ. ಯಾಕೆಂದರೆ ಇದನ್ನು ಆಚರಿಸುವುದರಲ್ಲಿ ಬಹುಮುಖ್ಯವಾಗಿ ರೈತರು ಸುಗ್ಗಿಯ ಹಬ್ಬವೆಂದು ಸಂಕ್ರಮಣದ ಕಾಲವನ್ನು ಸಂಭ್ರಮಿಸುತ್ತಿದ್ದಾರೆ. ಸುಗ್ಗಿ ಎಂದರೆ ವಿಪುಲವಾಗಿ ಬೆಳೆದದ್ದು ಅಥವಾ ಹೇರಳವಾಗಿ ಸಿಗುವಂತದ್ದು ಎನ್ನುವ ಅರ್ಥ ಕೊಡುತ್ತದೆ. ರೈತನಿಗೆ ಸುಗ್ಗಿಯ ಕಾಲ ಅಂದರೆ ತಾನು ವರ್ಷಾನುಗಟ್ಟಲೆ ಕಷ್ಟಪಟ್ಟು ದುಡಿದ ಬೆಳೆಯು ಕೈಗೆ ಸಿಗುತ್ತದೆ ಎಂಬ ಹರ್ಷವನ್ನುಂಟು ಮಾಡುವ ಈ ಕಾಲಘಟ್ಟವದು. ಇಂತಹ ಸುಸಂದರ್ಭದಲ್ಲಿ ಆಚರಿಸುವ ಮಕರ ಸಂಕ್ರಾಂತಿ ಹಬ್ಬವು ನಿಜಕ್ಕೂ ಅರ್ಥಗರ್ಭಿತವಾದದ್ದು.
ಇಲ್ಲಿ ರೈತನ ಹಬ್ಬದ ಸಂಭ್ರಮ ಮುಗಿಲೆತ್ತರಕ್ಕೆ ತಲುಪಿರುತ್ತದೆ. ರೈತ ಖುಷಿಯಾಗಿದ್ದರೆ ಉಳಿದವರೆಲ್ಲರೂ ಸಂತೋಷದಿಂದ ಇರುತ್ತಾರೆ ಎನ್ನುವದನ್ನು ಸಾಬೀತು ಪಡಿಸುವ ನಿಗೂಢ ಅರ್ಥವನ್ನು ಕೂಡಾ ಈ ಹಬ್ಬವು ಪ್ರತಿಬಿಂಬಿಸುತ್ತದೆ. ಯಾಕೆಂದರೆ ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ಮಾತಿನ ಸೂಕ್ಷ್ಮವಾದ ವಿಷಯಗಳನ್ನು ನಮಗೆ ಸೂಕ್ತವಾಗಿ ತಿಳಿಸಿಕೊಡುವ ಸುಗ್ಗಿಯ ಹಬ್ಬವಿದೆ ಅಂದ್ರೆ ಅದು ಕೇವಲ ಸಂಕ್ರಾಂತಿಯ ಹಬ್ಬ ಮಾತ್ರ ಅನ್ನೋದನ್ನು ನಾವು ಮನಗಾಣಬೇಕಿದೆ.
ಹಾಗೇಯೇ ಸೃಷ್ಟಿಯಲ್ಲಿ ಸೂರ್ಯನ ಪಥವು ಬದಲಾಗುವ ಈ ಶುಭದಿನವು ಪ್ರತಿಯೊಬ್ಬರಿಗೂ, ಪ್ರತಿಯೊಂದು ರೀತಿಯಲ್ಲಿಯೂ ನೈಜವಾಗಿ ಹಬ್ಬದ ವಾತಾವರಣವನ್ನು ಸಹಜವಾಗಿ ಮನದಾಳದಲ್ಲಿ ಮೂಡಿಸುತ್ತದೆ. ಸಂಕ್ರಮಣ ಎಂಬ ಹೆಸರಿನ ಈ ಹಬ್ಬವು ಅನೇಕಾನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಎಳ್ಳು-ಬೆಲ್ಲವನ್ನು ಸೇವಿಸಿ ಸಂಭ್ರಮದಿಂದ ಆಚರಿಸುವ ಸಂಕ್ರಾಂತಿಯ ಹಬ್ಬವು ಜಾತಿ-ಮತ-ಬೇಧಗಳನ್ನು ಮೀರಿ ಸಮನ್ವಯತೆಯಿಂದ ಬಾಳೋಣ ಎಂಬ ಸದುದ್ದೇಶವನ್ನು ಹೊಂದಿದೆ.
ಐತಿಹಾಸಿಕ ಕೃಷಿ ಸಮುದಾಯಗಳಲ್ಲಿ ಈ ಆಕಾಶ ಘಟನೆಯು ಗಮನಾರ್ಹವಾದ ತೂಕವನ್ನು ಹೊಂದಿತ್ತು. ಇದು ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತದೆ ಮತ್ತು ಫಲಪ್ರದ ಇಳುವರಿಗಾಗಿ ರೈತರು ಆಚರಿಸಲು ಶ್ರೇಷ್ಠ ಹಬ್ಬ. ತನ್ನ ಸಾರ್ಥಕ ಧನ್ಯವಾದಗಳನ್ನು ಪ್ರಕೃತಿಗೆ ಅರ್ಪಿಸುವ ಸಮಯವನ್ನು ಸಂಕ್ರಾಂತಿಯು ಸೂಚಿಸುತ್ತದೆ. ಧಾರ್ಮಿಕವಾಗಿಯೂ ಕೂಡಾ ಮಕರ ಸಂಕ್ರಾಂತಿ ಹಿಂದೂ ಪುರಾಣಗಳಿಂದ ಸಾಕಷ್ಟು ಸ್ಫೂರ್ತಿ ತುಂಬುವ ಹಬ್ಬವಾಗಿದೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಲ್ಲಿ ಕಾಣುತ್ತೇವೆ.
ಮಕರ ಸಂಕ್ರಾಂತಿಯ ಅರ್ಥ:-
ಮಕರ ಸಂಕ್ರಾಂತಿ ಎಂಬ ಪದವು ಮಕರ ಮತ್ತು ಸಂಕ್ರಾಂತಿ ಎಂಬ ಎರಡು ಪದಗಳಿಂದ ಬಂದಿದೆ. ಮಕರ ಎಂದರೆ ಮಕರ ಸಂಕ್ರಾಂತಿ ಮತ್ತು ಸಂಕ್ರಾಂತಿ ಎಂದರೆ ಸಂಕ್ರಮಣ. ಅಂದರೆ ಮಕರ ಸಂಕ್ರಾಂತಿ ಎಂದರೆ ಮಕರ ರಾಶಿಯಲ್ಲಿ (ರಾಶಿಯ ಚಿಹ್ನೆ) ಸೂರ್ಯನ ಸಂಕ್ರಮಣ ಎಂದರ್ಥ. ಅಷ್ಟೇ ಅಲ್ಲ ಈ ಸಂದರ್ಭವು ಹಿಂದೂ ಧರ್ಮದ ಪ್ರಕಾರ ಅತ್ಯಂತ ಪವಿತ್ರ ಮತ್ತು ಮಂಗಳಕರ ಸಂದರ್ಭವಾಗಿದೆ. ಎಲ್ಲರೂ ಕೂಡಾ ಸಡಗರದಿಂದ, ಭಕ್ತಿಪೂರ್ವಕವಾಗಿ ಸಂಕ್ರಮಣ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಈ ಅಂಶಗಳು ಪ್ರಮುಖ ಕಾರಣಗಳಾಗಿವೆ ಎಂಬುದನ್ನು ಗಮನಿಸಬೇಕಾಗುತ್ತದೆ.
ಸೂರ್ಯನನ್ನು ಮಕರ ರಾಶಿಗೆ ಬದಲಾಯಿಸುವುದು ದೈವಿಕ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಪವಿತ್ರವಾದ ನದಿಗಳಲ್ಲಿ ಸ್ನಾನ ಮಾಡುವುದರಿಂದ ನಮ್ಮ ಎಲ್ಲಾ ಪಾಪಗಳನ್ನು, ಅನಿಷ್ಟಗಳನ್ನು ಇಂದಿನ ದಿನದಂದು ತೊಳೆದುಕೊಳ್ಳಬಹುದು ಎಂಬುದಕ್ಕಾಗಿ ಸಾಕಷ್ಟು ಜನರು ನದಿಯ ಸ್ನಾನ ಮಾಡುವುದು ಕೂಡಾ ಈ ಹಬ್ಬದ ವೈಶಿಷ್ಟ್ಯವಾಗಿದೆ. ಈ ಸ್ನಾನವು ಆತ್ಮವನ್ನು ಶುದ್ಧವಾಗಿರಿಸಿ ಆಶೀರ್ವದಿಸುತ್ತದೆ ಎಂಬುದು ಕೋಟ್ಯಾಂತರ ಜನರ ಅಚಲ ನಂಬಿಕೆಯಾಗಿದೆ. ಜೊತೆಗೆ ಇದು ಆಧ್ಯಾತ್ಮಿಕ ಬೆಳಕಿನ ಹೆಚ್ಚಳ ಮತ್ತು ಭೌತಿಕ ಕತ್ತಲೆಯ ಕಡಿತವನ್ನು ಸೂಚಿಸುತ್ತದೆ. ವೈಜ್ಞಾನಿಕ ದೃಷ್ಟಿಕೋನದಿಂದಲೂ ಕೂಡಾ ಮಕರ ಸಂಕ್ರಾಂತಿಯಿಂದ ಹಗಲುಗಳು ದೀರ್ಘವಾಗುತ್ತವೆ ಮತ್ತು ರಾತ್ರಿಗಳು ಕಡಿಮೆಯಾಗುತ್ತಾ ಹೋಗುತ್ತವೆ.
ದೇಶದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ವಿಭಿನ್ನವಾಗಿ, ವಿಶೇಷವಾಗಿ ಆಚರಿಸಲಾಗುತ್ತಿದೆ ಮತ್ತು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಅಲ್ಲದೆ ಪ್ರತಿಯೊಂದು ಪ್ರದೇಶದ ಪದ್ಧತಿಯು ಕೂಡಾ ವಿಭಿನ್ನವಾಗಿದೆ ಮತ್ತು ಪ್ರತಿ ಪ್ರದೇಶವು ಆಯಾ ಪದ್ಧತಿಗಳೊಂದಿಗೆ ಆಚರಿಸುತ್ತದೆ. ಆದರೆ ಹಬ್ಬದ ಅಂತಿಮ ಗುರಿಯು ಮಾತ್ರ ಎಳ್ಳು-ಬೆಲ್ಲವನ್ನು ಪರಸ್ಪರರು ಹಂಚಿ ತಿನ್ನುತ್ತಾ "ಎಳ್ಳು-ಬೆಲ್ಲ ತೊಗೊಂಡು ಒಳ್ಳೆಯವರಾಗಿರೋಣ" ಎನ್ನುವ ಶುಭಹಾರೈಕೆಯೊಂದಿಗೆ ದೇಶದಾದ್ಯಂತ ಸುಖ, ಸಂತೋಷ ಸಮೃದ್ಧಿ, ಒಗ್ಗಟ್ಟು ಮತ್ತು ನೆಮ್ಮದಿಯನ್ನು ಉಂಟು ಮಾಡುವುದಾಗಿದೆ. ಇಂತಹ ಶ್ರೇಷ್ಠವಾದ, ಅತ್ಯಮೂಲ್ಯವಾದ ಹಬ್ಬವು ನಮಗೆಲ್ಲರಿಗೂ ಶುಭವನ್ನು ತರಲಿ ಎಂದು ಎಳ್ಳು-ಬೆಲ್ಲವನ್ನು ಸವಿದು ಎಲ್ಲರೂ ಒಂದಾಗಿ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸೋಣ ಬನ್ನಿ...!! ಒಂದಾಗಿ ವಿಜೃಂಭಿಸೋಣ..!!!
ಡಾ,ಬಿ,ಆರ್,ಅಂಬೇಡ್ಕರ ಪ್ರತಿಮೆಗೆ ಸ್ಥಳವಕಾಶಕ್ಕೆ ಸ್ಪಂಧಿಸಿದ ಸಚಿವ ಡಾ,ಮಾಹಾದೇವಪ್ಪವರಿಗೆ ಗೌರವ ಸನ್ಮಾನ!!
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಸಮಾಜಮುಖಿ ಕಾರ್ಯಗಳಾಗಿವೆ: ಯೋಜನಾಧಿಕಾರಿ ಶೇಖರನಾಯ್ಕ ಹೇಳಿಕೆ
ಚಡಚಣ ಸಂಗಮೇಶ್ವರ ಜಾತ್ರೆಯ ಸಂಭ್ರಮ ಬಾನAಗಳದಲ್ಲಿ ಚಿತ್ತಾರ ಬಿಡಿಸಿದ ಪಟಾಕಿಗಳು